ನಲ್ಲಿಕಾಯಿ ನಂತರದ ಸಿಹಿ

ಗೋಧಿ ಬಣ್ಣ ಸಾಧಾರಣ ಮೈಕಟ್ಟು ವಿಮರ್ಶೆ

godhi banna sadharna mykattu - nallikayi articles

ಜಗುಲಿಯ ತುದಿಯಲ್ಲಿ ಕುಳಿತು ಕಾಯುವವನಿಗೆ ಒಂದೆರಡು ಸಿಹಿ ಚಾಕೋಲೇಟ್ ತರುವ ಅಪ್ಪ, ಹಾಗೂ ಅವನ ಜೊತೆಗೇ ಬರುವ ಲೆಕ್ಕವಿಲ್ಲದಷ್ಟು ಸಂಭ್ರಮ…!! ಬರೀ ಧ್ವನಿ ಕೇಳಿದರೇ ಸಾಕು ಅಪ್ಪನದು, ಮುದುರಿ ಮಡಕೆಯಾದ ಮನಕೆ, ಎಲ್ಲಿಲ್ಲದ ಸಂಭ್ರಮ…! ಅಪ್ಪ ಅನ್ನೋನು ಎಲ್ಲರಿಗೂ ಖಾಸಗಿ ಹೆಮ್ಮೆ, ಖುಷಿ. ಅಮ್ಮನಿಗೆ ಸಾಲು ಸಾಲು ಕವನ ಬರೆಯುವ ಕವಿ, ಅಪ್ಪನ ವಿಷ್ಯದಲ್ಲಿ ಮಾತ್ರ ಅದೇನೋ ಹಮ್ಮು ತೋರಿ ಸುಮ್ಮನಾಗುತ್ತಾನೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಇತ್ತೀಚೆಗಿನ ದಿನಗಳಲ್ಲಿ ನಾಕಂಡ ಅತ್ಯಂತ ಅಚ್ಚುಕಟ್ಟಾದ ಚಿತ್ರ. ಕಳೆದುಹೋದ ಅಪ್ಪನನ್ನ ಹುಡುಕುವ ದಾರಿಯ ತಿರುವುಗಳಲ್ಲಿ ಅಲ್ಲಲ್ಲಿ ಸಿಗುವ ಅಪ್ಪನ ಜೊತೆಗಿನ ನಾಯಕನ ಸಂಬಂಧದ ತುಣುಕುಗಳಲ್ಲಿ, ಪ್ರತಿಯೊಬ್ಬರೂ ಅವರವರ ಅಪ್ಪನನ್ನ ನೆನಪಿನಂಗಳಕ್ಕೆ ಬರಮಾಡಿಕೊಂಡು ಒಂದು ಸಣ್ಣ ನಿಟ್ಟುಸಿರು ಬಿಟ್ಟು ಸುಮ್ಮನಾಗುತ್ತೀವಿ.

ಅನಂತ್ ನಾಗ್ ಬಿಡಿ. ಜಾಲಿಯೊಳಗೆ ಇಟ್ಟ ಉಪ್ಪಿನಕಾಯಿಯ ರುಚಿ ಬರ್ತಾ ಬರ್ತಾ ಜಾಸ್ತಿಯಾದಂಗೆ, ಇವರ ನಟನೆಯಲ್ಲಿನ ಪಕ್ವತೆ ಹೆಚ್ಚತ್ತಲೇ ಇದೆ. ಬಹುಚರ್ಚಿತ “…ನಿಮ್ಮ ಪುಷ್ಪಾ…!” ಸನ್ನಿವೇಷದಲ್ಲಂತೂ ಕಣ್ಣಂಚೆಲ್ಲಾ ಒದ್ದೆ ಒದ್ದೆ!!

ಅನಂತ್ನಾಗ್ ನಿಮ್ಮದೇ ದೊಡ್ಡಪ್ಪ, ಚಿಕ್ಕಪ್ಪನ ರೀತಿ ಕಂಡರೆ ಅಚ್ಚರಿಯಾಗ್ಬೇಡಿ!! ಈ ಮನುಷ್ಯನ ಪಾತ್ರದೊಳಗೇ ತಾನಾಗಿ ಹೋಗುವ ಅಭ್ಯಾಸ ಹಂಗಿದೆ. ಮಗನಾಗಿ ರಕ್ಷಿತ್ ಶೆಟ್ಟಿಯ ಪಕ್ವ ಅಭಿನಯ, ಸ್ಪಂದಿಸುವ ನಾಯಕಿಯಾಗಿ ಶೃತಿಯ ಚಂದದ ಪಾತ್ರ , ಜಾಸ್ತಿ ಇನ್ನೇನೂ ಬೇಡ ಅಲ್ವಾ ಒಂದು ೨ ಗಂಟೆಯ ಚಲನಚಿತ್ರ ಎದೆಗೆ ಹತ್ತಿರವಾಗೋಕೆ

ನಾಯಕಿಗೆ ಹೆಚ್ಚಿನ ಸಮಯದಲ್ಲಿ ಸೀರೆ ಬಿಟ್ರೆ ಅಲ್ಲಲ್ಲಿ ಚೂಡಿ, ಪ್ರದರ್ಶಿಸೋ ಬಟ್ಟೆಯಲ್ಲಿ ಅನರ್ಥಗರ್ಭಿತ ಹಾಡುಗಳಿಲ್ಲ. ಜನಕ್ಕೆ ಇಷ್ಟವಾಗ್ತಿದೆ.ಇಷ್ಟಕ್ಕೂ ನಾಯಕ ನಾಯಕಿ ಹಿಂದೆ ಮುಂದೆ ಸುತ್ತುವ ಕಥೆ ಇದಲ್ಲ ಬಿಡಿ. ಸಿನಿಮಾ ಹಾಲ್ ನ ತುಂಬಾ ಮಧ್ಯವಯಸ್ಸಿನ ಅಪ್ಪ-ಅಮ್ಮನೊಂದಿಗೆ ಬಂದವ್ರಿದ್ದರು. ಹೋಗುವಾಗ ಕಣ್ಣಂಚನ್ನ ಸೆರಗಿನ ತುದಿಯಲ್ಲಿ ಮುತ್ತಿಕೊಂಡು ಹೋಗುತ್ತಿದ್ದ ದೃಶ್ಯ, ನಮ್ಮ ಪೀಳಿಗೆಯ ಸಿನಿಮಾ ಹುಡುಗರಿಗೆ ದೊರೆತ ಜಯದಂತಿತ್ತು. ಸಾಧ್ಯವಾದ್ರೆ ಅಪ್ಪನೊಂದಿಗೇ ಹೋಗಿ ನೋಡಿ. ಜೀವ್ನ ಪೂರ್ತಿ ನಮಗಾಗಿ ದುಡಿಯುವ ಅಪ್ಪ ಎಂಬ ನಿಷ್ಕಲ್ಮಷ ವ್ಯಕ್ತಿಗೊಂದು ನಮನ ಪೂರಕ ಸಿನಿಮಾ ಇದು.

ಒಂದು ಜೀವನ ಪೂರ್ತಿ ಅಪ್ಪನೊಂದಿಗೆ ಹಮ್ಮಿನೊಂದಿಗೆ ಬದುಕಿದ ಅವನು ಬದಲಾಗಿದ್ದ. ತೀರಾ ನೆನೆಪಾಗಿದ್ದ ಅಪ್ಪನೊಂದಿಗೆ ಒಂದು ಕಪ್ ಕಾಫೀ, ಜೊತೆಗೆ ಒಂದಿಷ್ಟು ಲೋಕಭಿರಾಮ ಹರಟೆಯೊಂದಿಗೆ ಮತ್ತೆ ಮಗನಾದ. ದೂರದಲ್ಲಿ ನಿಂತಿದ್ದ ಮೊಮ್ಮಗ ನಗುತ್ತಾ ತನ್ನ ಆಟ ಮುಂದುವರೆಸಿದ್ದ…!

Picture credits GBSM


ಇದನ್ನು ಬರೆದವರು

ಶ್ರೀನಿಧಿ ವಿ.ಎನ್

ಶೇರ್‍ ಮಾಡಿ