ನಲ್ಲಿಕಾಯಿ ನಂತರದ ಸಿಹಿ

ಏನಿದು ನಲ್ಲಿಕಾಯಿ?

Nallikayi ಬಹಳ ಭಯ ಇತ್ತು. ಬೆಂಗಳೂರು ದೊಡ್ಡ ಸಿಟಿ, ಅಲ್ಲಿ ಹೇಗೆ ಇರೋದೊ ಏನೊ. ನಾನ್ ಬೇರೆ ಹಳ್ಳಿಯಿಂದ ಬಂದೋನು ಈ ಊರಿಗೆ ಅಡ್ಜಸ್ಟ್ ಆಗ್ತೀನೋ ಇಲ್ವೋ? ಊರಲ್ಲಿ ಯಾವ್ ಜಾತ್ರೆಗೂ ಸೇರ್ದೇ ಇರುವಷ್ಟು ಜನಗಳನ್ನ ಮಜೆಸ್ಟಿಕ್‍ನಲ್ಲಿ ನೋಡಿ ಇನ್ನೂ ಗಾಬ್ರಿ ಆಗಿದ್ದೆ. ಅಲ್ಲಿವರೆಗೂ ಆಕಡೆ ಹೋದವ್ನೆ ಅಲ್ಲ. ಇವಾಗ ಇಂಜಿನಿಯರ್‍ ಆಗಕ್ಕೆ ಹೊರ್ಟಿದ್ದೆ.

ನಾಲ್ಕು ವರ್ಷದ ಅಲ್ಲಿನ ಓದು ನನಗೆ ತುಂಬ ಕಲಿಸ್ತು. ಪುಸ್ತಕದಲ್ಲಿರೋದು ನನಗೆ ಬದ್ನೆಕಾಯಿನೇ ಆದ್ರೂ ಆ ಊರು ಕಲ್ಸಿದ್ದು ನಿಜವಾದ ಪಾಠ. ಇಂಜಿನಿಯರಿಂಗ್ ಹಾಗೋ ಹೀಗೋ ಮುಗ್ಸಿ ಒಂದು IT ಕಂಪನೀಲಿ ಕೆಲ್ಸ ಗಿಟ್ಸಿದ್ದೆ. ಒಳ್ಳೆ ಸಂಬ್ಳ, ಓಡಾಡಕ್ಕೆ ಕ್ಯಾಬ್ ಎಲ್ಲ ಕಂಪನಿ ಕೊಡ್ತಿತ್ತು. ಫ್ರೆಂಡ್ಸು, ಪಾರ್ಟಿ, ಗುಂಡು, ತುಂಡು ಎಲ್ಲಾ ಜೋರಾಗೆ ನಡೀತಿತ್ತು. ಹೇಳೋರು ಕೇಳೋರು ಇರ್ಲಿಲ್ಲ ನೋಡಿ.

ಆದ್ರೆ ವಾಸ್ತವ ಗೋತ್ತಾಗೋಕೆ ಜಾಸ್ತಿ ಸಮಯ ಹಿಡೀಲಿಲ್ಲ. ಕಂಪನಿ ನನಗೆ ಶಿಫ್ಟ್ ಮೇಲೆ ಶಿಫ್ಟ್ ಬದಲಾಯಿಸಿ ಕಬ್ಬು ಹಿಂಡುವ ಹಾಗೆ ಹಿಂಡ್ತಿತ್ತು. ಕೆಲ್ಸ ಚೇಂಜ್ ಮಾಡೊ ಯೋಚ್ನೆ ಏನೋ ಬಂತು ಆದ್ರೆ ಹೊಸ ಕಡೆ ಕೆಲ್ಸ ಸಿಗೋದು ತಡಾ ಆದ್ರೆ ಇವಾಗಾಗ್ಲೇ ಬಾಕಿ ಇರೋ ಇ.ಎಮ್.ಐಗಳನ್ನ ತೀರ್ಸೋದು ಹೇಗೆ? ಚೇಂಜ್ ಮಾಡಿದ್ ಮೇಲೆ ಮತ್ತೆ ಅಲ್ಲೂ ಇದೇ ಹಣೇಬರ ಇರಲ್ಲ ಅನ್ನೋ ಗ್ಯಾರಂಟೀನಾದ್ರು ಏನು? ಇದಕ್ಕೆಲ್ಲ ಅವಾಗ ಉತ್ತರ ಇರ್ಲಿಲ್ಲ.

ಕಂಪನಿಲಿ ಕೆಲ್ಸ ಮಾಡೋವಾಗ ಒಂದು ಒಳ್ಳೇ ಹವ್ಯಾಸ ಇಟ್ಕೊಂಡವ್ನಲ್ಲ, ಆದ್ರೂ ವೆಬ್‍-ಡಿಸೈನಿಂಗ್‍ ಮೇಲೆ ಒಲವಿತ್ತು. ಜೊತೇಗೆ ಒಂದಷ್ಟು ವಿದೇಶಿ ಮಕ್ಕಳಿಗೆ ಚೆಸ್ ಹೇಳ್ಕೊಡ್ತಿದ್ದೆ. ಇದೇ ನನ್ನ ಉಳ್ಸಿದ್ದು ನೋಡಿ. ಕಲೆಗೆ ಸಾವಿಲ್ಲ ಅನ್ನೊ ಮಾತು ಎಷ್ಟು ನಿಜ ಅನ್ಸಿದ್ದೂ ಅವಾಗ್ಲೇ. ನಿಧಾನಕ್ಕೆ ಕೆಲ್ಸ ಏನೋ ಬಿಟ್ಟೆ, ಆದ್ರೆ ಈ ಹಾಳಾದ ಎಜುಕೇಶನ್‍ ಲೋನ್ ತೀರ್ಸ್ಬೇಕಲ್ಲ! ಅದಕ್ಕೂ ಈ ನನ್ನ ಹವ್ಯಾಸಗಳೇ ದಾರಿ ಆದ್ವು.

ಇವಾಗ ಬೆಂಗ್ಳೂರು ಅಂದ್ರೆ ಅಷ್ಟು ಭಯ ಆಗಲ್ಲ. ಏನೇ ಅಂದ್ರು TV9 ತೋರ್ಸೋವಷ್ಟು ಕೆಟ್ಟದ್ದೇನು ಅಲ್ಲ ಬಿಡಿ. ಆ ಊರಲ್ಲಿ ದುಡ್ಡೇ ಜೀವ್ನ. ನನ್ನ ಜೊತೇ ಕೆಲ್ಸ ಮಾಡ್ತಾ ಇದ್ದ ಎಷ್ಟೊ ಜನ ತುಂಬಾನೆ ಟ್ಯಾಲೆಂಟೆಡ್ ಇದ್ರೂ, ತಿಂಗ್ಳು ತಿಂಗ್ಳು ಬರೋ ಸಂಬಳ ಎಲ್ಲಿ ನಿಂತು ಹೋಗತ್ತೋ ಅನ್ನೋ ಭಯಕ್ಕೇ ಇನ್ನೂ IT ನಲ್ಲೇ ಇದಾರೆ. ಅದು ಅವರ ಇಷ್ಟ ಬಿಡಿ. ಹೊರಗಿನ ಪ್ರಪಂಚದಲ್ಲಿ ಅವರಿಗೆ ಎಷ್ಟು ಬೆಲೆ ಸಿಗ್ಬೋದು ಅಂತ ನೆನ್ಸ್ಕೊಂಡ್ರೆ ಬೇಜಾರಾಗತ್ತೆ.

IT ಒಂದು ರೀತಿ ವರ ಆದ್ರೆ ಇನ್ನೊಂದು ರೀತೀಲಿ ಶಾಪ. ಅದಿರ್ಲಿ, ನನ್ನ ಈ ಹವ್ಯಾಸಗಳ ಜೊತೆಗೇ ನನಗೆ ಕನ್ನಡದ ಮೇಲೆ ಒಲವು ಜಾಸ್ತಿ ಇತ್ತು. ಕೆಲ್ಸ ಮಾಡೋವಾಗ ಆದಷ್ಟು ಎಲ್ಲರೊಂದಿಗೆ (ಕನಿಷ್ಟಪಕ್ಷ ಭಾಷೆ ಬರೋರ್ ಜೊತೆ) ಕನ್ನಡದಲ್ಲೇ ಮಾತಾಡೋ ಪ್ರಯತ್ನ ಮಾಡ್ತಿದ್ದೆ. ಒಬ್ರೋ ಇಬ್ರೋ ಗಾಂಚಲಿ ಮಾಡಿ ಮತ್ತೆ ಇಂಗ್ಲಿಷ್‍ಗೆ ಎಳೀತಿದ್ರು,ಇನ್ನೊಂದಷ್ಟು ಜನ ಕನ್ನಡ ಮಾತಾಡೋದೇ ಕೀಳು ಅನ್ನೋ ತರ ಆಡ್ತಿದ್ರು, ನಾನೂ ಕೇರ್‍ ಮಾಡ್ತಿರ್ಲಿಲ್ಲ. ಕೆಲ್ಸ ಬಿಟ್ಟ ನಂತರ ಬಹಳ ಸಮಯ ಇರ್ತಿತ್ತು. ಆಗ ನನ್ನ ಹವ್ಯಾಸಗಳಿಗೆ ಇನ್ನಷ್ಟು ಒತ್ತು ಕೊಟ್ಟೆ. ಒಳ್ಳೊಳ್ಳೆ ವೆಬ್‍ಸೈಟ್‍ಗಳನ್ನ ತಯಾರು ಮಾಡ್ದೆ. ಅವಾಗ ತಲೇಲಿ ಹೊಳ್ದಿದ್ದೇ ನಲ್ಲಿಕಾಯಿ.ಕನ್ನಡ ಓದಿ ಅಂತ ಫೋರ್ಸ್ ಮಾಡೋದ್ಕಿಂತ, ಮುಚ್ಕೊಂಡು ಕೇಳ್ರಪ್ಪ ಅನ್ನೋದು ಸುಲಭ ಅನ್ನಿಸ್ತು. ಹನೀಸಿಂಗ್‍ ಹಾಡುಗಳನ್ನೇ ಗಂಟೆಗಟ್ಲೆ ಕೇಳೋ ನಮ್ಗೆ, ಈ ಹತ್ತಿಪ್ಪತ್ತು ನಿಮಿಷದ ರೆಕಾರ್ಡ್‍ ಕೇಳಕ್ಕಾಗಲ್ವಾ?

ನಲ್ಲಿಕಾಯಿ ಅನ್ನೋ podcast ಶುರು ಮಾಡ್ದೆ. ಅದರ ಗೆಲುವಿಗೆ ಸಹಾಯ ಮಾಡಿದ ನನ್ನ ಗೆಳೆಯರಿಗೆ ಎಷ್ಟು ಧನ್ಯವಾಧ ಹೇಳಿದ್ರೂ ಸಾಲ್ದು. ಅಧ್ಬುತ ಅನ್ನೋ ತರದ ಧ್ವನಿ ಮುದ್ರಿಕೆಗಳು ಪ್ರಸಾರಗೊಂಡ್ವು. ನಮ್ಮ ಈ ಪ್ರಯತ್ನದಿಂದ ಯಾರಾದ್ರು ಒಬ್ಬ ನಮ್ಮ ಕೇಳುಗ ಒಂದು ಕನ್ನಡ ಪುಸ್ತಕ ಕೊಂಡ್ಕೊಂಡ್ರೂ, ನಮ್ಮ ಪ್ರಯತ್ನ ಸಾರ್ಥಕ.

ನಾನ್ಯಾಕೆ ಲಾಭಾನೇ ಇಲ್ದೇ ಇರೋದನ್ನ ಮಡ್ಬೇಕು ಅಂತ ನಿಮ್ಗೂ ಅನ್ನಿಸಬಹುದು. ಲಾಭ ಇದೆ. ಧನಲಾಭ ಅಲ್ಲ, ಮನಲಾಭ(ಹೊಸ ಪದ ಅನ್ಸತ್ತೆ). ಇದು ನನ್ನ ಸಂತೋಷಕ್ಕೆ ಮಾಡ್ತಾ ಇರೋ ಕೆಲ್ಸ. ಅದೇ ಕಾರಣಕ್ಕೆ ನಿಮಗೆ ನನ್ನ ಈ ಬ್ಲಾಗ್‍ಗಳಲ್ಲಿ ಯಾವುದೇ ಜಾಹೀರಾತು ಕಾಣಸಿಗೋದಿಲ್ಲ. ಕನ್ನಡ ನನಗೆ ಏನೆಲ್ಲ ಕೊಟ್ಟಿದೆ, ಕೊಡ್ತಾ ಇದೆ. ನಾನೂ ಏನಾದ್ರು ವಾಪಸ್ ಕೋಡೋ ಮನ್ಸು ಮಾಡಿದೀನಿ ಅಷ್ಟೆ.

ನನ್ನ ಇನ್ನೂ ಒಂದು ಆಶಯ ಅಂದ್ರೆ ಕನ್ನಡದಲ್ಲಿ ಕೆಲಸಗಳನ್ನ ಹುಟ್ಟುಹಾಕೋದು. ಇಂಗ್ಲಿಷ್‍ ಅನಿವಾರ್ಯತೆಯನ್ನ ತೆಗೆದು ಹಾಕೋದು. ಅದನ್ನೆಲ್ಲಾ ಇನ್ನೊಂದು ಲೇಖನದಲ್ಲಿ ಬರೀತೀನಿ. ಇಲ್ಲೀವರೆಗೂ ಒದಿದ್ದಕ್ಕೆ ಧನ್ಯವಾದ. ಅಂದ ಹಾಗೆ ಇದು ನಲ್ಲಿಕಾಯಿಯದೇ ಒಂದು ಭಾಗ. ಇಲ್ಲಿ ಅಕ್ಷರಗಳಿರುತ್ತವೆ ಅಷ್ಟೆ.


ಇದನ್ನು ಬರೆದವರು

ಶರತ್ ಡಿ.ಟಿ

ಶೇರ್‍ ಮಾಡಿ