ನಲ್ಲಿಕಾಯಿ ನಂತರದ ಸಿಹಿ

ಪಾಶ್ಚಿಮಾತ್ಯವೆಂಬ ದೂರದ ಬೆಟ್ಟ…

western life - nallikayi articles

ಈ ಘಟನೆ ಶುರುವಾಗುವುದು ೨೦೧೦ರಲ್ಲಿ.

ಅಮೇರಿಕಾದಾಗ ಓದಬೇಕು ಅಂತ ಎಲ್ಲಾ ತಯಾರಿತ್ತು. ಕೈಯಾಗ ವೀಸಾ, ಎರಡು ದೊಡ್ಡ-ದೊಡ್ಡ ಚೀಲ, ಚೀಲದಾಗ ಪುಸ್ತಕ, ಅರಬಿ, ಉಂಡಿ, ಚೂಡಾ ಎಲ್ಲಾ ತುಂಬಿ ತುಳುಕುಹಂಗ ಆಗಿತ್ತು. ವಿಮಾನ ಹತ್ತುದು ಒಂದ ಹತ್ತು ದಿವಸ ಇರಬೇಕಾದ್ರ ಮನಿದೇವ್ರಿಗೆ, ಬಂಧು-ಬಳಗದವ್ರಿಗೆ ಎಲ್ಲಾ ಭೆಟ್ಟಿಯಾಗುದು ಮುಗದಿತ್ತು. ನಾ ಹೊಂಟೆ ಅಂತ ಮನ್ಯಾಗ ಖುಷಿ ಇತ್ತು ಹಂಗ ದೂರ ಹೊಂಟೆ ಅಂತ ಬ್ಯಾಸರನೂ ಇತ್ತು.

ಇನ್ನೇನ ಹೋಗುದು ೪ ದಿನ ಐತಿಪಾ ಅನ್ನೂದ್ರಾಗ ಪೂನಾದಾಗ ಇರು ಭಾರತ-ಸರ್ಕಾರದ ರಕ್ಷಾ ಮಂತ್ರಾಲಯದಿಂದ ನಡ್ಸು ಕಾಲೇಜ್ನ್ಯಾಗ ಸ್ನಾತಕೋತ್ತರ ಪದವಿಗೆ ಆಯ್ಕೆ ಆಗೇನಿ ಅಂತ ಮಿಂಚೋಲೆ ಬಂತು. ಅದೂ ಅಲ್ಲಿ ಪುರಾ ಖರ್ಚು ಶಿಷ್ಯವೇತನದಿಂದ ಆಗುದಿತ್ತು. ಹಿಂಗಾಗಿ ಲಕ್ಷಾಂತರ ರುಪಾಯಿ ಸಾಲಾ ಮಾಡಿ ಅಮೆರಿಕಾಗ ಹೋಗುಕಿಂತ ನಮ್ಮಲ್ಲೇ ಛುಲೋ ಜಾಗಾ ಸಿಕ್ಕಾಗ ಬಿಡಬಾರ್ದಂದ ಆ ಎರಡ ಚೀಲದಾಗ ಒಂದ ತೊಗೊಂಡ ಪೂನಾಗ ಹೊಂಟ ಬಂದೆ.

೨೦೧೨ರಾಗ ಪೂನಾದಾಗ ಕಲ್ತಿದ್ದು ಆತು. ಅಮ್ಯಾಗ ನಮ್ಮ ಐ.ಐ.ಟಿನೋ ಅಥ್ವಾ ಐ.ಐ.ಎಸ್.ಸಿ.ಗೋ ಹೋಗುದಂತ ಮೊದ್ಲ ವಿಚಾರ ಮಾಡಿದ್ದೆ. ಆದ್ರ ಪೂನಾದಾಗ ಕಲಿಬೇಕಾರ ಒಮ್ಮೊಮ್ಮೆ ವಿದೇಶಕ್ಕ ಹೋಗಿ ಕಲ್ತ್ರ ಛುಲೋ ಇತ್ತೇನೋ ಅಂತ ಅನಸ್ತಿತ್ತು. ಹಿಂಗಾಗಿ, ಎರಡನೇ ಸ್ನಾತಕೋತ್ತರ ಪದವಿ ಮಾಡಾಕ ಅಂತ ಲಂಡನ್ಗೆ ಬಂದೆ.

ಕಾಲೇಜೇನೋ ಈಡೀ ಜಗತ್ತಿನಾಗ ೫ ಸ್ಥಾನದಾಗ ಇತ್ತು. ಅಲ್ಲಿ ಕಲಿಯು ಪರಿಸರ, ಕಲಸು ರೀತಿ, ಬ್ಯಾರೆ ಬ್ಯಾರೆ ದೇಶಗಳಿಂದ ಬಂದ ಸಹಪಾಠಿಗಳು ಒಂದು ಹೊಸ ವಾತಾವರಣ ಸೃಷ್ಟಿ ಮಾಡಿತ್ತು. ಅಲ್ಲಿ ಒಂದ ವರ್ಷ ಹೆಂಗ ಹೋತು ಅಂತ ತಿಳಿಲಿಲ್ಲ. ಅದ್ರಾಗೂ ನಾಕ ತಿಂಗ್ಳು ಜರ್ಮನಿಗೆ ಸಂಶೋಧನೆಗೆ ಬಂದಿದ್ದೆ. ಲಂಡನಾಗ ಕಲಿಯುದು ಮುಗದ್ಯ್ಮಾಗ ಒಂದೆರಡ ವಾರ ರಜಾ ತೊಗೊಂಡು ಮನಿಗೆ ಹೋಗಿ ರೊಟ್ಟಿ-ಝುಣುಕ ಹೊಡ್ದು, ಹೊಸ ಕೆಲ್ಸಕ್ಕ ಸೇರ್ಕೋಳಾಕ ಮತ್ತ ಜರ್ಮನಿಗೆ ಬಂದೆ.

ಈಗ ಜರ್ಮನಿದಾಗ ಕೆಲ್ಸ ಮಾಡ್ಕೋತ ಒಂದ ವರ್ಷದ ಮ್ಯಾಲೆ ಆತು. ಈ ಒಂದ ವರ್ಷ ಹೆಂಗ ಹೋತೋ ತಿಳಿವಾಲ್ತು. ವರ್ಷಕ್ಕ ಒಂದ-ಪಾಟಿ ಅಷ್ಟ ಊರಿಗೆ ಹೋಗುದು, ವರ್ಷಕ್ಕ ಒಮ್ಮೆ ಮನ್ಯಾವ್ರನ್ನ ಭೆಟ್ಟಿಯಾಗೂದು, ದೋಸ್ತರ ಮದ್ವಿಗೆ ಇಲ್ಲೇ ಕುಂತ ಹಾರೈಸುದು ಎಲ್ಲಾ ಒಂದ ತರಹ ವಿಚಿತ್ರ ಅನಸ್ತದ.

ನಮ್ಮ ದೇಶ ಬಿಟ್ಟು ಎರಡು ವರ್ಷದಮ್ಯಾಗ ಆಗೇತಿ. ಈ ಎರಡು ವರ್ಷದ ವೃತ್ತಿಜೀವನದಾಗ ಹೊಸ-ಹೊಸದು ಕಲ್ತೆನಿ. ಇನ್ನೂ ಕಲಿಯಾಕ ಭಾಳ ಅದ ಅನ್ನೂದು ಗೊತ್ತು. ಆದ್ರ ಈಪರಿ ಕಲ್ಯಾಕ, ನಮ್ಮ ಮನಿಯಿಂದ, ದೋಸ್ತರಿಂದ, ದೇಶದಿಂದ ದೂರ ಇರುದು ನೋಡಿದ್ರ ಗಳ್ಸುಕಿಂತ ಕಳ್ಕೋಳುದು ಭಾಳ ಅನಸ್ತದ. ಇಲ್ಲೇ ಇದ್ರ ವ್ಯಾಳೆ ಹೋದಂಗ ಹೊಸ-ಹೊಸ ಗೆಳೆಯರ, ಹೊಸ-ಹೊಸ ರೀತಿ-ನೀತಿಗಳಿಗೆ ಪೂರಾ ಒಗ್ಗತೇವಿ. ಅದ ಭಾಳ ಒಗ್ಗಿದ್ವಿ ಅಂದ್ರ ಮತ್ತ ನಮ್ಮ ತವರು ಮನಿಕಡೆ ಹೋಗುದು ಶಕ್ಯ ಆಗ್ದಿರಬಹುದು. ಇವಕೆಲ್ಲ ಕಾಲನ ಉತ್ತರ ಹೇಳ್ಬೇಕು.

ಕಾಲ ಮಿಂಚುವ ಮುನ್ನ
ಪಾಶ್ಚಿಮಾತ್ಯವೆಂಬ ದೂರದ ಬೆಟ್ಟವನ್ನೋಮ್ಮೆರಿ
ಅನುಭೂತಿ ಪಡೆದು, ಕೆಳಗಿಳಿದು, ಕುದುರೆಯನ್ನೇರು – ಮಂಕುತಿಮ್ಮ

ಮೂಲ


ಇದನ್ನು ಬರೆದವರು

ತೇಜೋಮಾತ್ರಾ

ಶೇರ್‍ ಮಾಡಿ